ಗ್ರೀನ್, ಥಾಮಸ್ ಹಿಲ್

1836-1882. ಇಂಗ್ಲಿಷ್ ದಾರ್ಶನಿಕ. ಆಗಿನ ಕಾಲದ ಯೂರೋಪಿನಲ್ಲಿ ನಿಯೊ ಕಾಂಟಿಯಾನಿಸಮ್ ಅಥವಾ ನಿಯೊ ಹೆಗೆಲಿಯಾನಿಸಮ್ ಎಂದು ಯಾವ ಪಂಥ ಪ್ರಚಾರದಲ್ಲಿತ್ತೊ ಅದನ್ನು ಇಂಗ್ಲೆಂಡಿನಲ್ಲಿ ಎತ್ತಿಹಿಡಿದವನೆಂದು ಪ್ರಸಿದ್ಧನಾಗಿದ್ದಾನೆ. ಈತ ಹುಟ್ಟಿದ್ದು ಯಾಕ್ರ್ಸನ ಬರ್‍ಕಿನ್‍ನಲ್ಲಿ. ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ. 1860ರಲ್ಲಿ ಅಲ್ಲಿಯ ಫೆಲೊ ಆಗಿ ಆಯ್ಕೆಯಾದನಲ್ಲದೆ ಅಲ್ಲೇ ತತ್ತ್ವಶಾಸ್ತ್ರ ಬೋಧಕನಾಗಿ ತನ್ನ ಜೀವಿತ ಕಾಲವೆಲ್ಲ ದುಡಿದ. ಇಂದ್ರಿಯಾನುಭವಗಳಿಗೇ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದ ವಾದಗಳು ಈತನ ಕಾಲದಲ್ಲಿ ತಾಂಡವವಾಡುತ್ತಿದ್ದುವಲ್ಲದೆ ಪ್ರಯೋಜನವಾದ ಪ್ರಚಲಿತವಾಗಿತ್ತು. ಇವನ್ನು ಈತ ಪ್ರತಿಭಟಿಸಲು ತೊಡಗಿದ. ಇದಕ್ಕಾಗಿ ಕಾಂಟ್ ಮತ್ತು ಹೆಗೆಲರ ದರ್ಶನಗಳಿಂದ ಸ್ಫೂರ್ತಿಪಡೆದ.

ಇತನ ಅಭಿಪ್ರಾಯದಲ್ಲಿ ಈ ಜಗತ್ತೆಂಬುದು ಅನೇಕ ರೀತಿಯ ಸಂಬಂಧಗಳ ಒಂದು ಜಾಲ. ಈ ಸಂಬಂಧಗಳ ಜ್ಞಾನವನ್ನು ಪಡೆಯುವಂಥದು ಮನಸ್ಸು. ಭಾವದಿಂದಾಗಲಿ ವೇದನೆಗಳಿಂದಾಗಲಿ ನಮಗೆ ಈ ಸಂಬಂಧಜ್ಞಾನ ಬರುವಂಥದು. ಬುದ್ಧಿಗೆ ಗೋಚರವಾಗುವ ಅನುಭವದಿಂದ ಮಾತ್ರ ಪ್ರಾಪ್ತವಾಗುವಂಥದು. ಇದೇ ಪ್ರಜ್ಞೆ. ವಸ್ತುಗಳ ನೈಜಸ್ಥಿತಿಗೂ ಅವುಗಳ ತೋರಿಕೆಗೂ ವ್ಯತ್ಯಾಸವಿದೆ. ಆದರೆ ಈ ವ್ಯತ್ಯಾಸ ಎರಡು ಭಿನ್ನ ತತ್ತ್ವಗಳಿಂದ ಉನ್ನತವಾದ ವ್ಯತ್ಯಾಸವಲ್ಲ. ಇವು ಒಂದೇ ತತ್ತ್ವದ ಎರಡು ಮುಖಗಳು. ಒಂದು ಉಪಾಧಿಸಹಿತವಾದ ಪ್ರಜ್ಞೆ, ಮತ್ತೊಂದು ಉಪಾಧಿರಹಿತವಾದ ಪ್ರಜ್ಞೆ. ಈ ಉಪಾಧಿರಹಿತವಾದ ಪ್ರಜ್ಞೆಯನ್ನೇ ಪರಾತ್ಪರತತ್ತ್ವವೆಂದು ಕರೆಯುತ್ತೇವೆ. ಇದೇ ಜಗತ್ತಿಗೆಲ್ಲಕ್ಕೂ ಆಧಾರಭೂತವಾದ ತತ್ತ್ವ.

ನೀತಿಶಾಸ್ತ್ರದಲ್ಲೂ ಗ್ರೀನ್ ಹೆಸರುವಾಸಿಯಾಗಿದ್ದ. ಇಲ್ಲಿಯೂ ಹೆಗೆಲ್‍ನ ಪ್ರಭಾವ ಕಂಡುಬರುತ್ತದೆ. ಇಚ್ಚೆಯನ್ನು ಕುರಿತ ವ್ಯಾಖ್ಯಾನವನ್ನು ಈತ ಮುಂದಿಡುತ್ತಾನೆ. ಪ್ರಾಣಿಗಳಲ್ಲಿ ಇಚ್ಛೇಗಳು ಪ್ರತ್ಯೇಕಶಕ್ತಿಗಳು. ಆದರೆ ಮನುಷ್ಯರಲ್ಲಿ ಅವು ಆತ್ಮದಲ್ಲಿ ಸಮನ್ವಯಗೊಳ್ಳುತ್ತವೆ. ಆತ್ಮತೃಪ್ತಿಗಾಗಿ, ಆತ್ಮವಿಕಾಸಕ್ಕಾಗಿ, ಆತ್ಮಸಾಕ್ಷಾತ್ಕಾರಕ್ಕಾಗಿ ಮವನ ಹಾತೊರೆಯುತ್ತಾನೆ. ಇವನಲ್ಲಿ ಜ್ಞಾನಶಕ್ತಿ, ಇಚ್ಛಾಶಕ್ತಿ, ಕ್ರಿಯಾಶಕ್ತಿಗಳು ಆತ್ಮವಿಕಾಸದ ವಿವಿಧ ಮುಖಗಳಾಗಿರುತ್ತವೆ. ಇದರಿಂದಲೇ ಮನುಷ್ಯನಲ್ಲಿ ಕರ್ತೃತ್ವಶಕ್ತಿ ಏರ್ಪಡುತ್ತದೆ. ಈ ಶಕ್ತಿಯ ಹಿಂದಿರುವ ಇಚ್ಛಾಶಕ್ತಿ ಇವನಿಗೆ ಇಚ್ಛಾಸ್ವಾತಂತ್ರ್ಯವನ್ನು ನೀಡುತ್ತದೆ. ಪ್ರತಿ ಮಾನವನ ಆತ್ಮವಿಕಾಸ ಕೇವಲ ಅವನದೇ ಆಗಿರುವುದಿಲ್ಲ. ಇತರರ ವಿಕಾಸದಲ್ಲಿ ತನ್ನ ವಿಕಾಸವನ್ನು ಸಾಧಿಸಿಕೊಂಡಾದ ಮಾತ್ರ ಇವನದು ಸುಗಮವಾಗುತ್ತದೆ. ಗ್ರೀನ್‍ಗೆ ಒಂದೇ ಒಂದು ಸಮಷ್ಟಿ ಆತ್ಮದಲ್ಲಿ ನಂಬಿಕೆ ಇರಲಿಲ್ಲ. ಆತ್ಮಗಳ ಪ್ರತ್ಯೇಕತೆಯನ್ನು ಈತ ಒಪ್ಪಿಕೊಂಡಿದ್ದ. ಪ್ರತಿ ಜಿವಾತ್ಮಗಳ ವ್ಯಕ್ತಿತ್ವಕ್ಕೆ ಈತ ಕೊಟ್ಟ ಬೆಲೆ ಈತನ ರಾಜ್ಯ ತತ್ತ್ವದ ಆಧಾರವಾಯಿತು. ವ್ಯಕ್ತಿಗಳ ಪ್ರತ್ಯೇಕ ಹಿತ ಸಾಮುದಾಯಿಕ ಹಿತದಲ್ಲಿ ಬೆರೆತಿದೆ ಎಂದೂ ಈತ ಬೋಧಿಸಿದ. ಹಕ್ಕುಗಳನ್ನು ಪಡೆಯಲು ವ್ಯಕ್ತಿಗೆ ಕರ್ತವ್ಯಪಾಲನೆ ಅರ್ಹತೆ ನೀಡುವುದೆಂದೂ ತಿಳಿಸಿದ. ರಾಜ್ಯಕ್ಕೆ ಆಧಾರವಾದ್ದು ದಂಡವಲ್ಲವೆಂದೂ ಧರ್ಮವೆಂದೂ ಸರ್ವಸಮ್ಮತಿ ಎಂದೂ ಪ್ರತಿಪಾದಿಸಿದ.

ಗ್ರೀನನ ಗ್ರಂಥಗಳಲ್ಲಿ ಮುಖ್ಯವಾದವು ಇವು : ಇಂಟ್ರೊಡಕ್ಷನ್ ಟು ಹ್ಯೂಮ್ (1874); ಪ್ರೋಲಿಗೊಮೆನಾ ಟು ಎಥಿಕ್ಸ್ (1883) ಮತ್ತು ಲೆಕ್ವರ್ಸ್ ಆನ್ ದಿ ಪ್ರಿನ್ಸಿಪಲ್ಸ್ ಆಫ್ ಪೊಲಿಟಿಕಲ್ ಆಬ್ಲಿಗೇಷನ್ (1895). ಗ್ರೀನನ ಸಮಗ್ರ ಬರೆಹಗಳನ್ನು ಆರ್.ಎಲ್. ನೆಟಲ್‍ಷಿಪ್ ಎಂಬಾತ 1885-8ರ ಅವಧಿಯಲ್ಲಿ ಮೂರು ಸಂಪುಟಗಳಲ್ಲಿ ಸಂಪಾದಿಸಿದ್ದಾನೆ. ಇದರಲ್ಲಿ ಸಂಪಾದಕನೇ ವಿಸ್ತಾರವಾಗಿ ಬರೆದ ಗ್ರೀನ್ ಜೀವನ ಚರಿತ್ರೆಯೂ ಇದೆ. 					(ಎಂ.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ